ಮಾತಂಗಿ ಮತ್ತು ಅವನ ಸಮಾಜದವರು ಭೂಮಿಗೆ ಮೊದಲಿಗರು. ಇವರು ಭೂ ಮೂಲ ಪುರುಷರು ಎನಿಸಿರುತ್ತಾರೆ 

	ಋಷ್ಯಮೂಕಪರ್ವತದ ಬಳಿಯಲ್ಲಿ ಆಶ್ರಮ ಮಾಡಿಕೊಂಡು ತಪಸ್ಸುಮಾಡಿಕೊಂಡಿದ್ದ ಒಬ್ಬ ಬ್ರಹ್ಮರ್ಷಿ. ವಾಲಿ ದುಂದುಭಿಯೆಂಬ ರಕ್ಕಸನನ್ನು ಕೊಂದು, ಮದೋನ್ಮತ್ತನಾಗಿ ಆ ದುಂದುಭಿಯ ರುಂಡವನ್ನು ಎಸೆದ. ಅದು ಮತಂಗಮುನಿಯ ಆಶ್ರಮದಲ್ಲಿ ಬಿದ್ದು, ಸುತ್ತಮುತ್ತಲ ಪ್ರದೇಶವನ್ನು ಹೊಲಸುಮಾಡಿತು. ಕೋಪಗೊಂಡ ಮುನಿ `ವಾಲಿ ಇಲ್ಲಿಗೆ ಬಂದರೆ ಅವನಿಗೆ ಮರಣವುಂಟಾಗಲಿ ಎಂದು ಶಾಪವಿತ್ತ. ಈ ಗುಟ್ಟನ್ನು ತಿಳಿದ ಸಹೋದರನ ಭಯವಿದ್ದ ಸುಗ್ರೀವ ತನ್ನ ಆಪ್ತ ಸಚಿವರೊಡನೆ ಋಷ್ಯಮೂಕಪರ್ವತದಲ್ಲಿ ನಿರ್ಭಯನಾಗಿದ್ದ. ರಾಮನಿಗೂ ಸುಗ್ರೀವನಿಗೂ ಇಲ್ಲಿಯೇ ಸ್ನೇಹವಾದದ್ದು (ರಾಮಾಯಣ). 

	ಮಹಾತಪಸ್ವಿ, ಪ್ರಭಾವಿ, ಅಪ್ರತಿಹತ ಶಕ್ತಿಸಂಪನ್ನ ಎನಿಸಿದ್ದ ಒಬ್ಬ ಮಹರ್ಷಿ. ಈತನ ಮಗ ಮಾತಂಗ, ಹಿಮವಂತ ಮತ್ತು ಮಾತಂಗ ಇಬ್ಬರೂ ಸ್ನೇಹಿತರು. ಒಮ್ಮೆ ಹಿಮವಂತ, ತಾನು ಪಾರ್ವತಿಯ ತಂದೆಯೆಂದು ಹೆಮ್ಮೆಯಿಂದ ನುಡಿದ. ಮಾತಂಗ ಮನನೊಂದು ಘೋರ ತಪಸ್ಸನ್ನು ಆಚರಿಸಿ, ಲಲಿತಾಪರಮೇಶ್ವರಿಯ ಮಂತ್ರಿಣಿಯಾದ ಶ್ಯಾಮಲಾ ದೇವಿಯನ್ನು ಮೆಚ್ಚಿಸಿ, ಆಕೆ ತನ್ನ ಮಗಳಾಗಿ ಜನಿಸುವಂತೆ ಬೇಡಿದ. ಹೀಗಾಗಿ ಮಾತಂಗ ತನ್ನ ಪತ್ನಿಯಲ್ಲಿ ಒಂದು ಹೆಣ್ಣು ಮಗುವನ್ನು ಪಡೆದ. ಈ ಮಗುವಿಗೆ ಲಘುಶ್ಯಾಮಲಾ ಎಂದು ಹೆಸರಿಡಲಾಯಿತು. ಈಕೆ ತಂದೆಯಿಂದ ಸಕಲ ವಿದ್ಯೆಗಳನ್ನು ಮಂತ್ರರಹಸ್ಯಗಳನ್ನು ಕಲಿತು ಮಹಾಪ್ರಭಾವಸಂಪನ್ನೆಯಾಗಿ ಲಲಿತಾಪರಮೇಶ್ವರಿಯ ಕೃಪೆಗೆ ಪಾತ್ರಳಾದಳು. ಮಾತಂಗಿಯೆಂದೂ ಇವಳಿಗೆ ಹೆಸರಾಯಿತು (ಬ್ರಹ್ಮಾಂಡ ಪುರಾಣ, ಲಲಿತೋಪಾಖ್ಯಾನ).
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ